ಕುಮಾರವ್ಯಾಸ (ಕವನ)  
ಕುಮಾರವ್ಯಾಸನು ಹಾಡಿದನೆಂದರೆ, 
  ಕಲಿಯುಗ ದ್ವಾಪರವಾಗುವುದು ! 
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ 
  ಮಿಂಚಿನ ಹೊಳೆ ತುಳುಕಾಡುವುದು !
ಆ ಕುರುಭೂಮಿಯು ತೋರುವುದು ;
   ಆ ರಣರಂಗದಲಿ,
   ಆ ಸಂಗ್ರಾಮದಲಿ, 
ಪಟುಭಟರಾರ್ಭಟ ಕೇಳುವುದು !
   ಮೈ ನವಿರೇಳುವುದು !    ೧

ಹೊಳೆಯುವ ಕೈದುಗಳಾಟದಲಿ, 
   ಕಲಿಗಳ ಕದನದ ಕೂಟದಲಿ, 
ತಾಗುವ ಗದೆಗಳ ಸಂಘಟ್ಟಣೆಯಲಿ, 
 ರಥಚಕ್ರಧ್ವನಿ ಚೀತ್ಕಾರದಲಿ,
  ಸಾಯ್ಯರ ಶಾಪದಲಿ,
   ಬೀಳ್ವರ ತಾಪದಲಿ 
ನಸುಸೋತಿರುವರ ಕೋಪದಲಿ, 
  ನೆರೆ ಗೆದ್ದಿಹರಾಟೋಪದಲಿ, 
ಕೆನೆಯುವ ಹಯಗಳ ಹೇಷಾರವದಲಿ,
     ಕಿವಿ ಬಿರಿಯುವುದು !
     ಎದೆ ಮುರಿಯುವುದು ! 
ಬಸಿಯುವ ಮಜ್ಜೆಯ ಪಂಕದೊಳೂಡಿ
  ಚಿಮ್ಮುವ ರಕ್ತನ ಬುಗ್ಗೆ ಯ ನೋಡಿ 
    ಕಣ್ಣೊಡೆಯುವುದು !
    ಮೈ ನಡುಗುವುದು !       ೨

ಕೇಳಿರಿ ! ಪಾರ್ಥನ ಸಾರಥಿಯು
   ರಣ ಗೀತೆಯನು,
   ರಣ ನೀತಿಯನು, 
ಬೋಧಿಸುವನು ನಿರ್ಭೀತಿಯನು ! 
ಕುರುರಂಗದ ಶರಶಯ್ಯೆಯಲಿ |
  ಭೀಷ್ಮನು ಮಲಗಿಹನು ! 
ಹೆಣಗಳ ಬಣಬೆಯ ಮಂಚದಲಿ
  ದ್ರೋಣನು ಬಿದ್ದಿಹನು ! 
ನೆತ್ತರವೀ೦ಟುತಲಿರುವನು ಭೀಮನು
   ಅಯ್ಯೋ, ನೋಡಲ್ಲಿ ! 
ರಥದಿಂದುರುಳುತಲಿರುವನು ಕರ್ಣನು,
   ಹಾ! ಹಾ! ನೋಡಿಲ್ಲಿ ! 
ರಣಚಂಡಿಯು ಆ ಬೆಂಕಿಯ ಮಗಳು 
ಹೆಣ್ಣಿನ ರೂಪದ ಬರಸಿಡಿಲವಳು ! 
  ಮುಗುಳ್ಳಗೆ ಬೀರುತ ನೋಡಲ್ಲಿ 
ನಿಂತಿರುವಳು ರಣರಂಗದಲಿ 
   ದ್ರೌಪದಿ ಮುಡಿಗೆದರಿ !     ೩

ವೈಶಂಪಾಯನ ಸರಸಿಯ ತೀರದಿ  
  ತೋರುವರಾರಲ್ಲಿ ! 
ಕೌರವದೇವನು ಸಿಡಿಲಾಗಿರುವನು
  ಭೀಮನ ಸರಿಸದಲಿ ! 
ವೈರಿಯ ಎದೆಯನು
  ಒಡೆಯುವ ಗದೆಯನು 
ಮೇಲೆತ್ತಿರುವನು ನೋಡಲ್ಲಿ ! 
ಭೀಮನು ಬಿದ್ದನೆ!
   ಕೌರವ ಗೆದ್ದನೆ! 
ಮುಂದಾಗುವುದನು ಕಾಣಲ್ಲಿ !
  ಇದಾವ ನ್ಯಾಯ ! 
   ಏನನ್ಯಾಯ !         ೪

  ಕೃಷ್ಣನ ಕುಹಕವ ನೋಡಲ್ಲಿ ! 
ಏನನು ನೋಡುವೆ ? ತಡೆಯುವೆ ಏಕೆ ? 
ಕೌರವರಾಯನು ಮಡಿಯಲೆ ಬೇಕೆ ? 
  ಯುವಕನೆ ತುಡುಕು ಕಠಾರಿಯನು !
    ಹೊಡೆ ರಣಭೇರಿಯನು ! 
ನಡೆ, ನಡೆ, ಊದು ತುತ್ತೂರಿಯನು !
   ಕರೆ, ರಣಮಾರಿಯನು !     ೫

ಕುಮಾರವ್ಯಾಸನು ಹಾಡಿದನೆಂದರೆ, 
ಕಲಿಯುಗ ದ್ವಾಪರವಾಗುವುದು ! 
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ 
ಮಿಂಚಿನ ಹೊಳೆ ತುಳುಕಾಡುವುದು !
   ಕಲಿ ಕೆಚ್ಚಾಗುವನು ! 
   ಕವಿ ಹುಚ್ಚಾಗುವನು !          ೬ ಪುಟ:ಕನ್ನಡದ ಬಾವುಟ.djvu/೧೫೨ಪುಟ:ಕನ್ನಡದ ಬಾವುಟ.djvu/೧೫೪
ಕವಿ:ಕೆ. ವಿ. ಪುಟ್ಟಪ್ಪ

ನೋಡಿ
ಕುಮಾರವ್ಯಾಸ ಭಾರತ
ಭಾವಗೀತೆಗಳು
ಪರಿವಿಡಿ

ಉಲ್ಲೇಖ